ಸೃಜನಾತ್ಮಕ ಸಾಹಿತ್ಯ ಮೊದಲು ರಚಿತವಾದ ಅನಂತರ ಅದರ ಲಕ್ಷಣ, ಸ್ವರೂಪಗಳನ್ನು ವಿವರಿಸುವ ವಿಮರ್ಶೆ ಬೆಳೆದು ಬರುತ್ತದೆಂಬ ವಿಷಯ ಎಲ್ಲ ಸಾಹಿತ್ಯಕ್ಕೂ ಅನ್ವಯಿಸುವ ಮಾತು. ಆದರೆ ವಿಮರ್ಶನ ಗ್ರಂಥಗಳು ಸ್ಪಷ್ಟವಾಗಿ ರಚನೆಗೊಳ್ಳುವ ಮೊದಲಿಗೂ ರೂಪುಗೊಂಡ ಸೃಜನಾತ್ಮಕ ಸಾಹಿತ್ಯದಲ್ಲಿ ವಿಮರ್ಶೆಯ ರೇಕುಗಳನ್ನು ಕಂಡಲ್ಲಿ ಆಶ್ಚರ್ಯಪಡಬೇಕಾದುದಿಲ್ಲ. ಇಂಗ್ಲಿಷ್ ಸಾಹಿತ್ಯದ ಅರುಣೋದಯ ಕಾಲದಲ್ಲಿ ಫ್ರೆಂಚ್ ಮತ್ತು ಇಟಾಲಿಯನ್ ಸಾಹಿತ್ಯದಿಂದ ವಸ್ತುವನ್ನು ಆಯ್ಕೆ ಮಾಡುವಲ್ಲಿ, ತನ್ನ ಕಥನ ಕವನಗಳಲ್ಲಿ ಸಾಧಿಸಿರುವ ಸ್ಪಷ್ಟ ಪಾತ್ರಸೃಷ್ಟಿ., ಭಾಷೆಯ ಔಚಿತ್ಯ, ಸಾವಯವ ಪ್ರಮಾಣ-ಮುಂತಾದ ಅನೇಕ ವಿಷಯಗಳಲ್ಲಿ ಚಾಸರ್ ಮಹಾಕವಿ ವಿಮರ್ಶಕನಿಗೆ ಅಗತ್ಯವಾದ ಪ್ರೌಢ ವಿವೇಚನೆಯನ್ನು ತೋರಿಸಿದ್ದಾನೆ. ಆದರೆ ಇಂಗ್ಲಿಷ್ ವಿಮರ್ಶೆ ಪ್ರಾರಂಭವಾದದ್ದು ಹೊಸ ಹುಟ್ಟಿನ ರಿನೇಸಾನ್ಸ್ ಕಾಲದಿಂದ ಎನ್ನುವುದು ನಿಜ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ